ಪೆರಿಗಾರ್ಡಿಯನ್ ಸಂಸ್ಕøತಿ -
	ಪೂರ್ವ ಶಿಲಾಯುಗದ ಅಂತ್ಯಭಾಗದಲ್ಲಿ ಯೂರೋಪಿನ ಹಲವು ಪ್ರದೇಶಗಳಲ್ಲಿ ಮುಖ್ಯವಾಗಿ ಫ್ರಾನ್ಸಿನಲ್ಲಿ ಬಳಕೆಯಲ್ಲಿದ್ದ ಕೂರಲಗು ಫಲಕದ ಕಲ್ಲಿನ ಆಯುಧ ಸಂಸ್ಕøತಿ. ಕ್ರಿ. ಪೂ. 35000 ದ ಸುಮಾರಿನಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಕøತಿ 10,000 ವರ್ಷಗಳಿಗೂ ಹೆಚ್ಚು ಕಾಲ ಪ್ರಚಲಿತವಾಗಿತ್ತೆಂದೂ ಅದರ ಮೊದಲ ಹಂತವನ್ನು ಚಟೆಲ್ ಪೆರಾನಿಯನ್ ಮತ್ತು ಕೊನೆಯ ಹಂತವನ್ನು ಗ್ರಾವೆಟಿಯನ್ ಸಂಸ್ಕøತಿಗಳೆಂದು ಕರೆಯಲಾಗಿದೆಯೆಂದೂ ಕೆಲವು ಪುರಾತತ್ತ್ವಜ್ಞರ ಅಭಿಪ್ರಾಯ. ಆದರೆ ಈವರೆಗಿನ ಸಂಶೋಧನೆಗಳಲ್ಲಿ ಎಲ್ಲೂ ಚಟೆಲ್ ಪೆರಾನಿಯನ್ ಮತ್ತು ಗ್ರಾವೆಟಿಯನ್ ಸಂಸ್ಕøತಿಗಳ ಅನೂಚಾನ ಬೆಳವಣಿಗೆಗೆ ಸಾಧಕವಾದ ಮಾಹಿತಿಗಳು ದೊರಕಿಲ್ಲ. ಕೆಲವೆಡೆಗಳಲ್ಲಂತೂ ಆ ಸಂಸ್ಕøತಿ ಪದರಗಳ ಮಧ್ಯೆ ಅರಿಗ್ನೇಷಿಯನ್ ಸಂಸ್ಕøತಿಯ ಅವಶೇಷಗಳು ಕಂಡುಬರುತ್ತವೆ. 

	ಯೂರೋಪಿನಲ್ಲಿ ಅವರೆಗೆ ವಾಸಿಸುತ್ತಿದ್ದ ನಿಯಾಂಡರ್‍ತಾಲ್ ಮಾನವ ಸಂತತಿಯನ್ನು ಬದಿಗೊತ್ತಿ ಹೊಸದಾಗಿ ಉದ್ಭವಿಸಿದ ಕ್ರೊಮ್ಯಾಗ್ನಾನ್ ಸಂತತಿಯ ಆಧುನಿಕ ಮಾನವ ಈ ಸಂಸ್ಕøತಿಯನ್ನು ಸ್ಥಾಪಿಸಿದಂತೆ ಕಾಣುತ್ತದೆ. ಮೊದಲ ಹಂತದ ಮುಖ್ಯ ಆಯುಧವೆಂದರೆ ಅಗಲವಾದ ಫಲಕದ ಒಂದು ಅಂಚು ಮೊಂಡಾಗಿಯೂ ಮತ್ತೊಂದು ಅಂಚು ಚೂಪಾಗಿಯೂ ಇದ್ದ ಚಾಕು. ಇಂಥ ಚಾಕುಗಳಲ್ಲಿ ಸಣ್ಣವನ್ನು ಬಾಣದ ಮತ್ತು ಎಸೆಯೀಟಿಯ ತುದಿಗಳನ್ನಾಗಿ ಉಪಯೋಗಿಸುತ್ತಿದ್ದಿರಬೇಕು. ಗ್ರಾವೆಟಿಯನ್ ಅಥವಾ ಎರಡನೆಯ ಹಂತ ಯೂರೋಪಿನ ಕಡೆಯ ಹಿಮಯುಗದ ಎರಡನೆಯ ಕಾಲದಲ್ಲಿದ್ದ ಸಂಸ್ಕøತಿ (ಕ್ರಿ. ಪೂ. 25000). ಆ ಸಂಸ್ಕøತಿಯ ಮುಖ್ಯ ಕಲ್ಲಿನ ಆಯುಧಗಳೆಂದರೆ ಚಟೆಲ್ ಪೆರಾನಿಯನ್ ಚಾಕುವಿಗಿಂತ ಸುಂದರವಾದ ಉತ್ತಮ ಕೆಲಸಗಾರಿಕೆಯಿಂದ ಕೂಡಿದ ಚಾಕುಗಳು, ಮತ್ತು ಕೈ ಹಿಡಿಕೆಗಳಿಗೆ ಕಟ್ಟಲು ಅನುಕೂಲಕರವಾದ ಬುಡವುಳ್ಳ ಮೊನೆಗಳು. ಗ್ರಾವೆಟಿಯನ್ ಸಂಸ್ಕøತಿಯ ಬಹಳ ಮುಖ್ಯ ಕೊಡುಗೆಯೆಂದರೆ ಪರ್ವತ ಗುಹೆಗಳ ಗೋಡೆ ಮತ್ತು ಚಾವಣೆಗಳ ಮೇಲೆ ಅವರು ರಚಿಸಿದ ವರ್ಣಚಿತ್ರಗಳು ಮತ್ತು ಆನೆ ದಂತಗಳಲ್ಲಿ ಕೊರೆದ ಸ್ತ್ರೀ ವಿಗ್ರಹಗಳು. ಫ್ರಾನ್ಸಿನ ಲ್ಯಾಸ್ಕೋ ಗುಹೆಯ ವರ್ಣಚಿತ್ರಗಳು ಅವರ ಕೊಡುಗೆ.									
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ